Blogger Tips and TricksLatest Tips And TricksBlogger Tricks Blogger Tips and TricksLatest Tips And TricksBlogger Tricks

ಮಾಗಳ ವಾಣಿ: ಮಾಗಳದಲ್ಲಿ ಹೊಳೆಗೆ ಎಡೆಕೊಡುವ ಹಬ್ಬ



ಮಾಗಳ ಗ್ರಾಮದಲ್ಲಿಂದು ಹೊಳೆಗಂಗಮ್ಮನಿಗೆ ಎಡೆ ನೀಡುವ ಹಬ್ಬ. ಪಂಚಮಿಯ ಹಾಲು ಹಾಕುವ ದಿನದ ಮರುದಿನವೇ ಹೋಳಿಗೆ ಹಬ್ಬ. ಅಂದೇ ಮಾಗಳ ಗ್ರಾಮದ ವರಪ್ರಸಾದ ಎನಿಸಿರುವ ಮಹಾ ತಾಯಿ ಮಾತೃ ಸ್ವರೂಪಿಣಿ “ತುಂಗ ಭದ್ರೆ”(ಜೀವ ನದಿ)ಗೆ ಎಡೆಕೊಡುವ ಹಬ್ಬ. ನಮ್ಮ ಊರಿನ ಹೆಣ್ಣು ಮಕ್ಕಳಿಗೆ ಈ ಹಬ್ಬ ಒಂದು ವಿಶೇಷವೇ ಸರಿ. ಆಷಾಡ ಮಾಸ ಕಳೆದು ಶ್ರಾವಣ ಮಾಸ ಆರಂಭವಾಗಿ ಕೆಲವೇ ಕೆಲ ದಿನಗಳು ಉರುಳಿರುತ್ತವೆ. ಹೊಸ ಹೊಸ ಬಟ್ಟೆ, ಸೀರೆಗಳನ್ನು ತೊಟ್ಟು ಮನೆಯಲ್ಲಿ ಅಕ್ಕ-ತಂಗಿ, ತಾಯಿ, ಸ್ನೇಹಿತಯರೊಡಗೂಡಿ ಹೋಳಿಗೆ, ಅನ್ನ, ರುಚಿಯಾದ ಮಸಾಲೆ ಸಾರು, ಪೂಜೆಗೆ ಬೇಕಾದ ಸಾಮಗ್ರಿಗಳು, ತಾಯಿಗೆ ನೀಡಲು ನೈವೇದ್ಯ(ಎಡೆ), ತೆಂಗಿನ ಕಾಯಿ, ಕರ್ಪೂರಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಓಣಿಯಲ್ಲಿನ ವಾರಿಗಿತ್ತಿ(ಗೆಳೆತಿಯರು)ಯರೊಡನೆ ಹೊಸ ವಸ್ತ್ರ ಧರಿಸಿ, ಬಣ್ಣದ ಬಳೆ ಧರಿಸಿ, ಹೂವು ಮುಡಿದು ಶ್ರಾವಣ ಮಾಸದ  ಶುಭ ದಿನಲ್ಲಿ ಹೊರಟು, ಬಯಲು ಬಸವೇಶ್ವರ ದೇವಸ್ಥಾನದ ದರ್ಶನ ಪಡೆದು, ಸ್ಟಿಮರ್ ಹೊಳೆಗೋ, ಮಲ್ಲದಾಸರ ಹೊಳೆಗೋ ಹೋಗಿ, ಮೈದುಂಬಿ ಹರಿಯುತ್ತಿರುವ ತಾಯಿ ತಂಗೆಯಲ್ಲಿ ಒಂದು ಕ್ಷಣ ಮಿಂದೆದ್ದು ಎರಡು ಹನಿ ನೀರನ್ನು ಮೈಗೆ ಸಿಂಪಡಿಸಿಕೊಂಡು ಪವಿತ್ರವಾದ ನದಿಗೆ ನಾನಾ ತರಹದ ಹೂವು, ಪತ್ರಿಗಳಿಂದ ಪೂಜೆ ಗೈದು, ಮನೆಯಿಂದ ತಂದಿದ್ದ ತೊಂಗಿನಕಾಯಿಗೆ ಒಂದು ಕುಬುಸ ಅಥವಾ ಸೀರೆಯನ್ನು ಸುತ್ತಿ ದಾರದಿಂದ ಮಾಡಿದ 5 ಎಳೆ ಸರವನ್ನು ಹಾಕಿ ಕರ್ಪೂರ ಬೆಳೆಗೆ ಮನೆಯಿಂದ ತಂದಿದ್ದ ನೈವೇಧ್ಯವನ್ನು ತಾಯಿ ತುಂಗೆಗೆ ಸಮರ್ಪಿಸಿ, ನಮ್ಮ ಗ್ರಾಮಕ್ಕೆ, ಹೊಲಗಳಿಗೆ ನೀರು ಸಾಕಾಗುವಷ್ಟಾಗಲಿ, ತಾಯಿ ತುಂಗೆ ಈ ವರ್ಷಪೂರ್ತಿ ಮೈದುಂಬಿ ಹರಿಯಂದು ಕೇಳಿಕೊಳ್ಳುತ್ತಾ ಗೆಳೆತಿಯರೊಂದಿಗೆ ನೀರಿನಲ್ಲಿ ಆಟವಾಡುತ್ತಾ ತಂದಿದ್ದ ಬುತ್ತಿಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಸವಿಯಾದ ಹೋಳಿಗೆ, ತುಪ್ಪ,ಅನ್ನ, ಮಸಾಲೆ ಸಾಂಬಾರ್ ಅನ್ನು ಹೊಟ್ಟೆ ತುಂಬಾ ಸವಿದು ಬರುವಾಗ ನದಿಯಿಂದ ತುಂಬಿಕೊಂಡು ಬಂದ ಅರ್ಧ ನೀರನ್ನು ಬಯಲು ಬಸವೇಶ್ವರನಿಗೆ, ಇನ್ನರ್ಧ ನೀರನ್ನು ಗ್ರಾಮದ ಅಗಸಿಯಲ್ಲಿರುವ ಹೊನ್ನತ್ತೆಮಮ್ಮ ದೇಗುಲದ ಮೂರ್ತಿಗೆ ಅರ್ಪಿಸಿ ಮನೆಗೆ ತೆರಳುವರು.

               
 ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ನವ ವಧುಗಳಿಗದು ಸ್ವರ್ಗದ ಹಬ್ಬ. ಯಾಕೆಂದರೆ 18-20-25 ವರ್ಷಗಳಿಂದ ಹುಟ್ಟಿ ಬೆಳೆದ ಊರನ್ನು ಬಿಟ್ಟು ಗಂಡನೆಮನೆಯ ಹೊಸ ಪರಿಸರ, ಹೊಸ ಜನರಿಗೆ ಹೊಂದಿಕೊಳ್ಳುವುದೇ ದುಸ್ತರವಾಗಿರುತ್ತದೆ. ಅಂದಮೇಲೆ ವರ್ಷದ ಮೊದಲನೇ ಹಬ್ಬವನ್ನು ಆಚರಿಸಲು ತವರು ಮನೆಗೆ ಬಂದ ಹೆಣ್ಣು ಮಕ್ಕಳು ತಮ್ಮ ಸ್ನೇಹಿತೆಯರೊಡನೆ ತಮ್ಮ ಕಷ್ಟ-ಸುಖ ಹಂಚಿಕೊಳ್ಳಲು ಇದು ಸರಿಯಾದ ವೇದಿಕೆಯೇ ಸರಿ.

                ಗಂಡು ಮಕ್ಕಳಿಗೂ ಕೂಡಾ ಈ ಹಬ್ಬ ಒಂದು ಮೋಜೇ ಸರಿ. ಯಾಕೆಂದರೆ ಅವರೂ ಕೂಡಾ ಹೊಸ ಬಟ್ಟೆ ಧರಿಸಿ ಗೆಳೆಯರೊಡನೆ ಸೇರಿ ವಿವಿಧ ಮನೋರಂಜನಾ ಆಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅಲ್ಲದೇ ತಮ್ಮ ತಮ್ಮ ಸ್ನೇಹಿತರೊಡಗೂಡಿ ಗ್ರಾಮದ ನದಿಗೆ ಓಗಿ ನಮಸ್ಕರಿಸಿ, ಅಕ್ಕ- ತಂಗಿಯರೊಡಗೂಡಿ ಊಟವನ್ನು ಸವಿಯುವರು

                ಇಂತಹ ಹತ್ತು ಹಲವು ವಿಶೇಷತೆ ಹೊಂದಿರುವ ಪಂಚಮಿ ಹಬ್ಬ, ಹೊಳೆಗೆ ಎಡೆ ಕೊಡುವ ಈ ಹಬ್ಬವನ್ನು ನೆನೆಸಿಕೊಂಡರೆ ಯಾವ ಕೋಟಿಕೊಟ್ಟರೂ ಈ ಸಂಭ್ರಮ ಮರಳಿ ಬರುವುದಿಲ್ಲವಲ್ಲವೇ ಸ್ನೇಹಿತರೇ. ನಿಜವಾಗಿಯೂ ಇಂತಹ ಹಬ್ಬ,  ತಂದೆ ತಾಯಿ, ಅಕ್ಕ, ತಂಗಿ, ಸ್ನೇಹಿತರು, ಮನೋರಂಜನೆ, ಸಂಬ್ರವನ್ನು ಕಳೆದುಕೊಂಡು ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. 

ಮರೆಯದಿರಿ ಸ್ನೇಹಿತರೇ ಬನ್ನಿ ಇಂತಹ ಹಬ್ಬ ಹರಿದಿನಗಳಿಗೆ ನಾವು ಸಾಕ್ಷಿಯಾಗೋಣ.ಅತೀಯಾದ ಬ್ಯುಸಿ ಶೆಡ್ಯುಲ್ ನಲ್ಲೂ ನಾವು ನಮ್ಮ ತನವನ್ನು ಮೆರೆಯೋಣ, ಕಳೆದು ಹೋದ ಸುಖಗಳ ಅನುಭವಿಸೋಣ, ಎಲ್ಲರೊಂದಾಗಿ ಹಾಡೋಣ, ನಲಿಯೋಣ, ನಮ್ಮ ಗ್ರಾಮದ ಪರಂಪರೆಯ ಉಳಿಸಿ ಬೆಳೆಸೋಣ

No comments:

Post a Comment