Blogger Tips and TricksLatest Tips And TricksBlogger Tricks Blogger Tips and TricksLatest Tips And TricksBlogger Tricks

ವರ ಮಹಾಲಕ್ಷ್ಮಿ ಪೂಜಾ ವಿಧಾನ ಮತ್ತು ಮಹಿಮೆ : ಮಾಗಳ ವಾಣಿ Magala Vani

ಭಾರತದ ದಕ್ಷಿಣದ ಭಾಗಗಳಲ್ಲಿ ಹೆಚ್ಚು ವಿಜೃಂಭಣೆಯಿಂದ ನಡೆಸುವ ವರಮಹಾಲಕ್ಷ್ಮಿ ಪೂಜೆಯನ್ನು ಉತ್ತರದ ಭಾಗಗಳಲ್ಲಿ ಮಹಾಲಕ್ಷ್ಮಿ ವೃತದ ಮೂಲಕ ಆಚರಿಸುತ್ತಾರೆ. ಎರಡೂ ಭಾಗಗಳಲ್ಲೂ ಒಂದೇ ದೇವರಾದ ಲಕ್ಷ್ಮಿಯನ್ನು ಕುಟುಂಬದ ಅಭ್ಯುದಯ ಮತ್ತು ಪ್ರಗತಿಗಾಗಿ ಪೂಜಿಸಲಾಗುತ್ತದೆ. ಇಲ್ಲಿ ವರ ಎಂದರೆ ದೇವರ ಕೃಪಾಕಟಾಕ್ಷವಾಗಿದೆ. ಅಂದರೆ ವರವನ್ನು ನೀಡುವ ದೇವರು ವರಮಹಾಲಕ್ಷ್ಮಿಯಾಗಿದ್ದಾರೆ ಎಂಬುದು ನಂಬಿಕೆಯಾಗಿದೆ. ವರಮಹಾಲಕ್ಷ್ಮಿ ವ್ರತವನ್ನು ವಿವಾಹವಾದ ಮುತ್ತೈದೆಯರು ಕೈಗೊಳ್ಳುತ್ತಾರೆ. 
 
ವರಮಹಾಲಕ್ಷ್ಮಿ ವ್ರತವನ್ನು ಮಾಡುವುದು ಅಷ್ಟಲಕ್ಷ್ಮಿಯರ (ಎಂಟು ಲಕ್ಷ್ಮಿಯರು) ವ್ರತಕ್ಕೆ ಸಮನಾದುದು ಎಂಬುದು ಹಿಂದಿನಿಂದಲೂ ಬಂದ ನಂಬಿಕೆ. ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಮತ್ತು ಶಕ್ತಿಯ ಎಂಟು ದೇವತೆಗಳನ್ನು ಪೂಜಿಸಿದ ಮಹತ್ವ ಪುಣ್ಯ ವರಮಹಾಲಕ್ಷ್ಮಿ ದೇವರನ್ನು ಪೂಜಿಸುವುದರಲ್ಲಿದೆ ಎಂದು ಹೇಳುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನಕ್ಕಿಂತ ಮೊದಲು ಶುಕ್ರವಾರದಂದು ಈ ವ್ರತವನ್ನು ಕೈಗೊಳ್ಳಲಾಗುತ್ತದೆ. 
 
ವಿವಾಹವಾದ ಮಹಿಳೆಯರು ಹೆಚ್ಚು ಶ್ರದ್ಧೆ ಭಕ್ತಿಯಿಂದ ಈ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲೇ ಸ್ನಾನವನ್ನು ಮುಗಿಸಿ ದಿನದ ಅರ್ಧ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ. ಕುಟುಂಬ ಶಾಂತಿ ಸಮಾಧಾನಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಾರೆ. ಅಷ್ಟ ಲಕ್ಷ್ಮಿಯರ ಪೂಜೆಯನ್ನು ಮಾಡಿದಂತಹ ಪುಣ್ಯ ವರಮಹಾಲಕ್ಷ್ಮಿ ವೃತದಲ್ಲಿ ದೊರೆಯುವುದರಿಂದ ಶ್ರದ್ಧೆ ಭಕ್ತಿ ಪೂಜಿಸುವಾಗ ಇರಲೇಬೇಕು.
 
ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿ ಪೂಜೆ ಅಥವ ವರಮಹಾಲಕ್ಷ್ಮಿ ವ್ರತವನ್ನು ತಮ್ಮ ಕುಟುಂಬಗಳ ಏಳಿಗೆಗೆ ಮತ್ತು ಯೋಗ ಕ್ಷೇಮಕ್ಕೆ ಮಾಡುವ ಅಥವ ಆಚರಿಸುವ ಒಂದು ಪ್ರಮುಖ ಪೂಜಾ ಕಾರ್ಯಕ್ರಮ.
ಪ್ರಸ್ತುತ ವರ್ಷದಲ್ಲಿ ವರಲಕ್ಷ್ಮಿ ವ್ರತ ಆಗಸ್ಟ್ 8ರಂದು ಬರುತ್ತದೆ. ವರಮಹಾಲಕ್ಷ್ಮಿ ಪೂಜೆಯು ಆಗಸ್ಟ್ ತಿಂಗಳಿನ ಒಂದು ಶುಕ್ರವಾರ ಬರುತ್ತದೆ ಮತ್ತು ಪೂಜೆಯ ತಯಾರಿಯನ್ನು ಹಿಂದಿನ ದಿನ ಗುರುವಾರವೇ ಆರಂಭವಾಗುತ್ತದೆ. ಪೂಜೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಗುರುವಾರ ಸಂಜೆಯೇ ಸಂಗ್ರಹಿಸಲಾಗುತ್ತದೆ. 
 
ಶುಕ್ರವಾರದ ದಿವಸ ಮುಂಜಾನೆ ಬೇಗನೆ ಎದ್ದು ಮಹಿಳೆಯರು ಸ್ನಾನಮಾಡುತ್ತಾರೆ. ಸಾಂಪ್ರದಾಯಿಕವಾಗಿ ಪೂಜೆಯ ದಿವಸ ಮುಂಜಾನೆ ಏಳುವ ಸಮಯಕ್ಕೆ ಬ್ರಾಹ್ಮೀ ಮುಹೂರ್ತವೆಂದು ಹೇಳುತ್ತಾರೆ. ಆ ನಂತರ ಪೂಜೆಗೆ ಗೊತ್ತುಪಡಿಸಿದ ಸ್ಥಳ ಮತ್ತು ಮನೆಯೆಲ್ಲವನ್ನೂ ಶುಚಿಗೊಳಿಸಿ ಒಂದು ಸುಂದರವಾದ ರಂಗೋಲಿ ಅಥವ "ಕೋಲಂ" ಪೂಜೆ ಮಾಡುವ ಉದ್ದೇಶಿತ ಸ್ಥಳದಲ್ಲಿ ಚಿತ್ರಿಸುತ್ತಾರೆ. ಇದಾದ ಮೇಲೆ ಮುಂದಿನ ಹೆಜ್ಜೆಯೆಂದರೆ "ಕಳಶ" ಸ್ಥಾಪನೆ. ಒಂದು ಕಂಚಿನ ಅಥವ ಬೆಳ್ಳಿ ಚೊಂಬು ತೆಗೆದುಕೊಂಡು ಚೆನ್ನಾಗಿ ಶುಚಿಗೊಳಿಸಿ ಆ ಚೊಂಬಿನ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬರೆದು ಶ್ರೀಗಂಧದ ಲೇಪನ ಮಾಡುತ್ತಾರೆ. ಕಳಶದ ಚೊಂಬಿನಲ್ಲಿ ಅಕ್ಕಿ ಅಥವ ನೀರು, ನಾಣ್ಯಗಳು, ಒಂದು ನಿಂಬೆಹಣ್ಣು, ಐದು ವೀಳ್ಯದ ಎಲೆಗಳು ಮತ್ತು ಅಡಿಕೆಯನ್ನು ಹಾಕಿ ತುಂಬಿಸುತ್ತಾರೆ. ಈ ರೀತಿಯ ಚೊಂಬಿನಲ್ಲಿ ತುಂಬುವ ಸಂಪ್ರದಾಯವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಮತ್ತು ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಣ್ಣದ ಬಳೆಗಳು ಮತ್ತು ಕಪ್ಪು ಬಣ್ಣದ ಮಣಿಗಳನ್ನು ಚೊಂಬಿನ ಪಕ್ಕದಲ್ಲಿ ಜೋಡಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಚೊಂಬಿನ ಸುತ್ತಲೂ ಒಂದು ಬಟ್ಟೆಯನ್ನು ಕಟ್ಟಿ ಚೊಂಬಿನ ಬಾಯಿಯಲ್ಲಿ ಮಾವಿನೆಲೆಯನ್ನು ಇಟ್ಟು ನಿಲ್ಲಿಸುತ್ತಾರೆ. ಕೊನೆಯಲ್ಲಿ ಒಂದು ತೆಂಗಿನಕಾಯನ್ನು ಶುದ್ಧೀಕರಿಸಿ, ಅದರ ಮೇಲೆ ಅರಶಿನವನ್ನು ಬಳಿದು ತೆಂಗಿನಕಾಯಿಯ ಜುಟ್ಟು ಮೇಲೆ ಬರುವ ಹಾಗೆ ಚೊಂಬಿನ ಮೇಲೆ ಕೂಡಿಸುತ್ತಾರೆ. ಈ ತೆಂಗಿನಕಾಯಿಗೆ ಲಕ್ಷ್ಮಿ ದೇವಿಯ ಮುಖವಾಡವನ್ನು ಕಟ್ಟುತ್ತಾರೆ, ಅಥವ ಮುಖವಾಡದ ಬದಲು ಅರಿಶಿನದಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಬಿಡಿಸುತ್ತಾರೆ. ಈ ರೀತಿ ಮಾಡುವುದರಿಂದ ಕಳಶವು ಲಕ್ಷ್ಮಿ ದೇವಿಯನ್ನು ಸಾಂಕೇತಿವಾಗಿ ಪ್ರತಿನಿಧಿಸುತ್ತದೆ. ಕ್ಯಾರೆಟ್ ಪಾಯಸ- ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಪೆಷಲ್ ಕೆಲವು ಪ್ರದೇಶಗಳಲ್ಲಿ ಕಳಶದ ಹಿಂದೆ ಒಂದು ಕನ್ನಡಿ ಇಡುವ ಪದ್ಧತಿಯಿದೆ. ಈಗಂತೂ ಮಾರುಕಟ್ಟೆಯಲ್ಲಿ ವಿಶೇಷವಾಗಿ ತಯಾರಿಸಿದ ಲಕ್ಷ್ಮಿ ದೇವಿ ಲಭ್ಯವಿರುವ ಚೊಂಬುಗಳು ದೊರಕುತ್ತವೆ. ಕಳಶವನ್ನು ಸಾಮಾನ್ಯವಾಗಿ ಒಂದು ಅಕ್ಕಿಯ ಪೀಠದ ಮೇಲೆ ಇರಿಸುತ್ತಾರೆ. ಪೂಜೆ ಮಾಡುವಾಗ ಮೊದಲು ಗಣೇಶನನ್ನು ಪೂಜೆ ಮಾಡಲಾಗುತ್ತದೆ. ತದನಂತರ ವರಮಹಾಲಕ್ಷ್ಮಿ ದೇವಿಯ ಪೂಜೆ ಆರಂಭವಾಗುತ್ತದೆ. 
 
ಪೂಜೆಯಲ್ಲಿ ಲಕ್ಷ್ಮಿ ದೇವಿಯ ಶ್ಲೋಕಗಳನ್ನು ಹೇಳುವುದರ ಮೂಲಕ ಮತ್ತು ಲಕ್ಷ್ಮಿ ಸಹಸ್ರನಾಮಗಳನ್ನು ಸ್ಫಟಿಸುವುದು ಕೂಡಿರುತ್ತವೆ. ಕಳಶಕ್ಕೆ ಆರತಿಯನ್ನು ಮಾಡುತ್ತಾರೆ. ವಿವಿಧ ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಕೆಲವರು ಪೊಂಗಲ್ ಅರ್ಪಿಸುತ್ತಾರೆ. ಕೆಲವೆಡೆ ಪೂಜೆ ಮಾಡಿದ ಮಹಿಳೆಯರು ತಮ್ಮ ಕೈ ಮಣಿಕಟ್ಟಿನಸುತ್ತಲು ಹಳದಿದಾರವನ್ನು ಕಟ್ಟಿಕೊಳ್ಳುತ್ತಾರೆ. ವರಮಹಾಲಕ್ಷ್ಮಿ ಮಾಡುವ ಮಹಿಳೆಯು ಕೆಲವು ವಿಧದ ಆಹಾರಗಳನ್ನು ವರ್ಜಿಸುತ್ತಾರೆ. ಈ ಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಕೆಲವು ಪ್ರದೇಶಗಳಲ್ಲಿ ಪೂಜೆ ಮಾಡುವ ಮಹಿಳೆಯರು ಪೂಜೆ ಮುಗಿಸುವವರೆಗೆ ಉಪವಾಸದಲ್ಲಿರುತ್ತಾರೆ. ಸುತ್ತಮುತ್ತಲಿನ ಮನೆಗಳಲ್ಲಿರುವ ಮಹಿಳೆಯರನ್ನು ಆಹ್ವಾನಿಸಿ ಅವರಿಗೆ ವಿಳ್ಯದ ಎಲೆ, ಅಡಿಕೆ ಮತ್ತು ಸುಣ್ಣದ ತಾಂಬೂಲವನ್ನು ಕೊಡುತ್ತಾರೆ. ಹಾಗೂ ಸಾಯಂಕಾಲ ಲಕ್ಷ್ಮಿ ಕಳಶಕ್ಕೆ ಆರತಿಯನ್ನು ಮಾಡುತ್ತಾರೆ.
 
 ವರಮಹಾಲಕ್ಷ್ಮೀ ವ್ರತದ ಆಚರಣೆ ಹೇಗೆ? 
 
 ಮರುದಿನ, ಅಂದರೆ ಶನಿವಾರ, ಸ್ನಾನಮಾಡಿದ ನಂತರ ಕಳಶವನ್ನು ತೆರೆದು ಎಲ್ಲವನ್ನು ಬಿಚ್ಚಿ, ಅದರಲ್ಲಿ ಇಟ್ಟಿದ್ದ ನೀರನ್ನು ಮನೆಯ ಎಲ್ಲಾ ಪ್ರದೇಶದಲ್ಲಿ ಚಿಮುಕಿಸುತ್ತಾರೆ. ನೀರಿನ ಬದಲು ಅಕ್ಕಿಯನ್ನಿಟ್ಟಿದ್ದರೆ, ಅದರಲ್ಲಿ ಅನ್ನ ಮಾಡಿ ಆ ಅನ್ನವನ್ನು ಊಟಕ್ಕೆ ತಯಾರಿಸಿದ ಅನ್ನದ ಜೊತೆ ಬೆರಸುತ್ತಾರೆ. ವರಮಹಾಲಕ್ಷ್ಮಿ ಪೂಜೆಯನ್ನು ಮಾಡಲು ಅಂಥಹ ಕಟ್ಟು ನಿಟ್ಟದ ನಿಯಮಗಳೇನಿಲ್ಲ ಮತ್ತು ಸರಳವಾಗಿಯೂ ಮಾಡಬಹುದು. ಭಕ್ತಿಯಿಂದ ಸರಳವಾಗಿ ಪ್ರಾರ್ಥನೆಸಲ್ಲಿಸಿದರೂ ಸಹ ಲಕ್ಷ್ಮಿದೇವಿಯನ್ನು ಮೆಚ್ಚಿಸಬಹುದು. 
 
ವರ ಮಹಾಲಕ್ಷ್ಮಿ ಕಥಾ ಹಿನ್ನಲೆ

ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ನೈಮಿಶಾರಣ್ಯದಲ್ಲಿ ಒಟ್ಟಾಗಿ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು- 'ಎಲೈ ಪುರಾಣಪುರುಷೋತ್ತಮನೆ ! ತ್ರಿಕಾಲಜ್ಞಾನಿಯಾದ ನೀನು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತವನ್ನು ಹೇಳು" ಎಂದು ಕೇಳಿದರು. ಸಂತುಷ್ಟನಾದ ಸೂತಮಹಾಮುನಿ ಆಗ ಪುಂಖಾನುಪುಂಖ ಹೇಳಿದ ವಿಷಯವಿದು... ಎಲೈ ಋಷಿಗಳಿರಾ ! ಕೇಳಿ, ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತವೊಂದುಂಟು. ಅವರ ವಿವರವನ್ನು ನಿಮಗೋಸ್ಕರ ಹೇಳುವೆನು ಕೇಳಿ- ಮನೋಹರವಾದ ಶೃಂಗಗಳಿಂದ ಒಪ್ಪುತ್ತಿರುವ ಕೈಲಾಸಪರ್ವತವು ದೇವನದಿಗಳಿಂದ ಪೂರ್ಣವಾಗಿ ಫಲಭರಿತವಾದ ನಾನಾಬಗೆಯ ವೃಕ್ಷಸಮೂಹದಿಂದ ಕೂಡಿ ಕಾಮಧೇನು ಕಲ್ಪವೃಕ್ಷ ಸೇವಿತಮಾಗಿ ಸಕಲ ಸುಖಗಳಿಗೂ ಆವಾಸಸ್ಥಾನವಾಗಿರುವುದು. ಆದ ಕಾರಣ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು. ಒಂದಾನೊಂದು ಕಾಲದಲ್ಲಿ ಹರ್ಷಯುಕ್ತನಾಗಿ ದೇವದೇವನಾದ ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿರುವಾಗ ಲೋಕಾನುಗ್ರಹಾರ್ಥವಾಗಿ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, 'ಎಲೈ ಮಹಾದೇವನೆ ! ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತವಾವುದು? ಅದನ್ನು ನನಗೆ ಹೇಳು" ಎಂದು ಕೇಳಿದಳು.
 
ಆಗ ಪರಮೇಶ್ವರನು- 'ಎಲೌ ಪಾರ್ವತಿಯೆ ! ಕೇಳು. ಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತವೆಂಬುದೊಂದುಂಟು. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು" ಎಂದನು. ಆಗ ಆನಂದತುಂದಿಲಳಾದ ಪಾರ್ವತಿ, 'ಸ್ವಾಮಿ ! ಆ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?" ಎಂದು ಕೇಳಿದಳು. ಆಗ ಪರಮೇಶ್ವರನು, 'ಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು. ಹಾಗೆ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುವು. ಇದು ಸತ್ಯ.
 
 ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ನಿನಗೋಸ್ಕರವಾಗಿ ವಿಸ್ತರಿಸಿ ಹೇಳುವೆನು, ಕೇಳು" ಎಂದು ಕಥೆಯನ್ನು ಹೇಳಲು ಅನುವಾದನು... ಪೂರ್ವ ಕಾಲದಲ್ಲಿ ಮಹಾ ವೈಭವಯುಕ್ತವಾದ ವಿದರ್ಭದೇಶಕ್ಕೆ ರಾಜಧಾನಿಯಾದ ಕುಂಡಿನನಗರದಲ್ಲಿ ದರಿದ್ರಳಾದರೂ ಸದಾಚಾರ ಸಂಪನ್ನಳಾದ, ಪತಿ ಶುಶ್ರೂಷೆಯೆ ಮುಖ್ಯವೆಂದು ತಿಳಿದು ಸದಾ ಸಂತೋಷಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ಉಳ್ಳವಳಾಗಿದ್ದ ಚಾರುಮತಿ ಎಂಬ ಸ್ತ್ರೀ ಇದ್ದಳು. ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿ ಕರುಣಾಳುವಾದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳಿದಳು- 'ಎಲೌ ಪತಿವ್ರತೆಯಾದ ಚಾರುಮತಿಯೆ ! ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗ್ರಹಿಸಿಕೊಂಡು ನೀನು ಆಚರಿಸಿದರೆ ಅದರಿಂದ ನಿನಗೆ ಮಹಾಪ್ರಯೋಜನ ಉಂಟಾಗುವುದು. ನಿನ್ನ ದಾರಿದ್ರ್ಯವು ನಾಶವಾಗಿ ನಿನಗೆ ಅಷ್ಟೈಶ್ವರ್ಯವು ಪ್ರಾಪ್ತಿಯಾಗುವುದು. ಆದ ಕಾರಣ ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ನನ್ನ ಪೂಜೆಯನ್ನು ಮಾಡಿದರೆ ನಾನು ಅವರಿಗೆ ಸಕಲ ಭೋಗಭಾಗ್ಯಗಳನ್ನು ಕೊಡುವೆನು. ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುವುದಲ್ಲದೆ ಅನ್ಯರಿಗೆಂದಿಗೂ ಹುಟ್ಟಲಾರದು. ಇಹಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುವರೊ ಅವರೇ ಧನ್ಯರು ! ಅವರೇ ಶೂರರು ! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು".
 
ಹೀಗೆ ನಿದ್ರೆಯಲ್ಲಿ ಉಪದೇಶಿಸಿ ಮಹಾಲಕ್ಷ್ಮಿಯು ಕಣ್ಮರೆಯಾದಳು.  ಆಗ ಚಾರುಮತಿಯು ಭ್ರಾಂತಳಾಗಿ ನಿದ್ರೆಯಿಂದೆದ್ದು ನಡೆದ ಸಂಗತಿಯನ್ನೆಲ್ಲ ತನ್ನವರಿಗೆ ಹೇಳಿ ಅವರೊಡನೆ ಆನಂದಿಸುತ್ತ ಕೆಲವು ದಿವಸಗಳನ್ನು ಕಳೆಯಲು ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಭಕ್ತಿವಂತರಾಗಿ ಶ್ರದ್ಧೆಯಿಂದ ಕಲ್ಪೋಕ್ತಪ್ರಕಾರವಾಗಿ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು. ಇತ್ತ ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು. ಪುತ್ರಪೌತ್ರಾದಿಗಳಿಂದ ಕೂಡಿ, ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಇಹಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು. ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು. - ಪರಮೇಶ್ವರ ಕಥೆಯನ್ನು ಹೇಳಿ ಮುಗಿಸಲು, ಪಾರ್ವತಿಯು, 'ಎಲೈ ದೇವದೇವನೆ ! ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು" ಎಂದು ಕೇಳಿಕೊಂಡಳು. 
 
ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು- 'ಕೇಳೌ ದೇವಿಯೆ ! ಕೇವಲ ಪುಣ್ಯಪ್ರದವಾದ ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳಸ್ನಾನಾನಂತರ ಶುಭವಸ್ತ್ರಗಳನ್ನು ಧರಿಸಬೇಕು. ಮನೆಯಲ್ಲಿ ರಂಗವಲ್ಯಾದಿಗಳಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು. ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನಪುರಸ್ಸರವಾಗಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. ಪದ್ಮಾಸನೆ, ಪದ್ಮಊರು, ಪದ್ಮಾಕ್ಷಿ, ಪದ್ಮ ಸಂಭವೆ ಎಂಬ ಮಂತ್ರ ಪೂರ್ವಕವಾಗಿ ಷೋಡಶೋಪಚಾರ ಪೂಜೆಯಿಂದ ದೇವಿಯನ್ನು ತೃಪ್ತಿಪಡಿಸಿ, ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು.
 
ಅನಂತರ ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು". ಸೂತಪುರಾಣಿಕನು ಶೌನಕಾದಿ ಋಷಿಗಳಿಗೆ ಇಷ್ಟೆಲ್ಲಾ ಹೇಳಿದಾಗ, ಋಷಿಗಳು ಸಂತೋಷ ಭರಿತರಾದರು. ಇಂಥ ವರ ಮಹಾಲಕ್ಷ್ಮಿ ವ್ರತವನ್ನು ಯಾರು ಮಾಡುವರೊ, ಈ ಕಥೆಯನ್ನು ಯಾರು ಕೇಳುವರೊ ಅವರಿಗೆ ದಾರಿದ್ರ್ಯ ದುಃಖಾದಿಗಳು ನಾಶವಾಗಿ ಪುತ್ರಪೌತ್ರಾದಿ ಸಂಪತ್ತಿಯಿಂದ ಸಕಲ ಭಾಗ್ಯಗಳೂ ಕೈಗೂಡುತ್ತವೆ.

ಆಧಾರ : 
http://kannada.oneindia.com/festivals/shravana/2002/1308varalakshmi.html
http://kannada.boldsky.com/inspiration/short-story/rituals-varalakshmi-puja-008051.html
http://kannada.boldsky.com/inspiration/how-perform-varamahalakshmi-puja-008047.html

No comments:

Post a Comment